ಅನುವಾದಿತ ಕಥೆ

ನಾಟ್‌ಇನ್ಮೈಟಮ್ಮಿ, ಬಟ್‌ಇನ್ಮೈಮೈಂಡ್

ಕಥೆ : ವಿಕಾಸ್ ಪ್ರಕಾಶ್ ಜೋಶಿ

ಅನುವಾದ :ಆರ್ಯಾಂಬ ಶಾಂತಿಗ್ರಾಮ ನರಸಿಂಹಮೂರ್ತಿ

ಪ್ರಾಥಮಿಕ ಶಾಲೆಯ ವರ್ಗದಿಂದಅಧ್ಯಾಪಕರು ಯೋಗ್ಯ ಅವಧಿಗಿಂತ ಹೆಚ್ಚು ಹೊರಬಂದಾಗಯಾರಾದರೂ ಹಾಡಲು ಅಥವಾ ಹಾಸ್ಯ ಮಾಡಲು ಪ್ರಾರಂಭಿಸುತ್ತಾರೆ. ಇದೇ ನ್ಯೂಟನ್‌ರ ಐದನೇ ಶಾಶ್ವತ ನಿಯಮ. ಪುಣೆಯ ಕೋರೆಗಾಂವ್ ಪಾರ್ಕ್ನಲ್ಲಿದ್ದ ಡೈಮಂಡ್‌ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿನ ಐದನೇ ತರಗತಿಯ ಮಕ್ಕಳು ಈ ನಿಯಮವನ್ನು ಪಾಲಿಸುವ ತುಂಟರಾಗಿದ್ದರು.

ಒಂದು ಉದ್ದವಾದ ಸ್ಟೇನ್‌ಲೆಸ್ ಸ್ಟೀಲ್ ರೂಲರ್‌ ಅನ್ನು ಕ್ಲಾಸಿನ ಮುಂದೆ ಸಿನ್ನಾಮನ್ ಮೈಕಿನಂತೆ ಹಿಡಿದುಕೊಂಡು ‘ಲಕಡಿ ಕಿ ಕಾಠಿ’ ಎಂಬ ಹಿಂದಿ ಹಾಡನ್ನು ತನ್ನ ಧ್ವನಿಯ ಮೇಲ್ಭಾಗದಲ್ಲಿ ಹಾಡಲು, ಇತರ ಇಪ್ಪತ್ತು ವಿದ್ಯಾರ್ಥಿಗಳು ಅಪಶೃತಿಯಲ್ಲಿ ಗದ್ದಲದಿಂದ ಹಾಡಲು ಆರಂಭಿಸಿದರು. ಮಕ್ಕಳಿಗೆ ಪರಿಸರ ವಿಜ್ಞಾನ(ಇ.ವಿ.ಎಸ್) ಕ್ಲಾಸಿನಿಂದ ಸ್ವಲ್ಪ ವಿರಾಮ ಸಿಕ್ಕಿತು. ಸಿನ್ನಾಮನ್‌ಗೆ ನಾಯಕಿಯಾಗಿ ಸೇರಿಕೊಂಡವಳು ಪಲ್ಲವಿ.

ಕುದುರೆಗಳು ಮಿತಿಮೀರುವ ಮುನ್ನ ಇ.ವಿ.ಎಸ್ ಮೇಡಂ ಶ್ರೀಮತಿ ಅರೋರಾ ತರಗತಿಗೆ ಮರಳಿದರು

“ಕುದುರೆಗಳೇ ಸೆಟಲ್ ಆಗಿ! ರೋಶನ್, ಪಲ್ಲಿ ನಿಮ್ಮ ನಿಮ್ಮ ಜಾಗಗಳಲ್ಲಿ ಕುಳಿತುಕೊಳ್ಳಿ” ಎಂದರು.

ಹೀಗೆ ಕ್ಲಾಸ್ ಪಾಠಕ್ಕೆ ಮರಳಿತು.

ಕ್ಲಾಸ್ ಮುಗಿದಕೂಡಲೆ ವಿದ್ಯಾರ್ಥಿಗಳು ಗದ್ದಲದಿಂದ ಹೊರಡಲು ಪ್ರಾರಂಭಿಸಿದರು.

“ರೋಶನ್”

“ಏನು ಮೇಡಂ?”

“ನಿನ್ನ ಮನೆ ಎಲ್ಲಿದೆ?”

“ಕೋರೆಗಾವ್ ಪಾರ್ಕ್ ಮೇಡಂ”

“ನಿನಗೆ, ಹಾಡಲು ಇಷ್ಟನಾ?”

“ಹೌದು, ತುಂಬಾ ಇಷ್ಟ”

“ಮುಂಬೈನಲ್ಲಿರೋ ಗುಲ್ಜಾರ್‌ ಕೂಡ ನೀನು ಅವರ ಸಾಹಿತ್ಯ ಹಾಡಿದರೆ ಕೇಳ್ತಾರೇನೊ”

“ಹೌದಾ……..  ಮೇಡಂ?”

“ಹೌದು”

ಸಿನ್ನಾಮನ್ ನಾಚಿಕೆಯಿಂದ ತಲೆ ತಗ್ಗಿಸಿದ. ಹೇಗೆ ಪ್ರತಿಕ್ರಿಯಿಸಬೇಕೆಂದು ಅವನಿಗೆ ಸರಿಯಾಗಿ ತಿಳಿಯಲಿಲ್ಲ. ಇಂತಹ ಮೆಚ್ಚುಗೆ ಅವನಿಗೆ ಸಿಕ್ಕಿದ್ದು ಅದೇ ಮೊದಲು.

“ಥ್ಯಾಂಕ್ಸ್ ಮೇಡಂ”

“ನಿನಗೆ ಸಿನ್ನಾಮನ್ ಅಂತ ಅಡ್ಡ ಹೆಸರು ಹೇಗೆ ಬಂತು?ಎಲ್ಲರೂ ಹಾಗೆ ಕರೆಯುತ್ತಾರಲ್ಲ?”

“ನನ್ನ ಅಪ್ಪ ಅಮ್ಮನಿಗೆ ಎಲ್ಲಾದಕ್ಕುದಾಲ್ಚೀನಿ ಹಾಕುವುದು ಇಷ್ಟ.ಚಹಾ, ಪೇಸ್ಟ್ರಿ ಮತ್ತೆ ರೋಲ್‌ಗಳಿಗೂ ಅವರು ದಾಲ್ಚೀನಿ ಸೇರಿಸುತ್ತಾರೆ.ನಾನು ಚಿಕ್ಕವನಿದ್ದಾಗ ಸಿನ್ನಾಮನ್ ಎಂಬ ಪದವನ್ನು ಉಚ್ಚರಿಸಲು ಬರುತ್ತಿರಲಿಲ್ಲ.ಅದನ್ನು ಸಿಮ್ನಾನಮ್, ಸಿನ್ನಾಮಮ್ ಅಥವಾ ಸಿಮಾಮಮ್ ಎಂದು ವಿಧವಿಧವಾಗಿ ಹೇಳುತ್ತಿದ್ದೆ. ಹಾಗಾಗಿ ಅಪ್ಪ ಅಮ್ಮ ನನ್ನನ್ನು ಸಿನ್ನಾಮನ್ ಎಂದೇ ಕರೆಯಲು ಆರಂಭಿಸಿದರು. ನನಗೆ ಆ ಹೆಸರು ಇಷ್ಟವಿಲ್ಲ. ಅದನ್ನು ಬದಲಾಯಿಸುವೆ.”

“ನಿನ್ನಅಪ್ಪಅಮ್ಮನಿಗೆ ಸಂಗೀತ ಅಂದ್ರೆ ಇಷ್ಟನಾ?”

“ಇಲ್ಲ ಮೇಡಂ, ಅವರಿಗೆ ಅಷ್ಟು ಇಷ್ಟವಿಲ್ಲ, ಅಂದರೆ ಹುಚ್ಚು ಇಲ್ಲ” ಕೈ ಸನ್ನೆ ಮಾಡುತ್ತಾ ಸಿನ್ನಾಮನ್ ಮೇಡಂಗೆ ಅರ್ಥ ಮಾಡಿಸಲು ಯತ್ನಿಸಿದ.

ಅರೋರಾ ಮೇಡಂ ಮುಗುಳ್ನಗೆ ಬೀರಿದರು.

“ನನಗೆ ಗೊತ್ತಿಲ್ಲ ಮೇಡಂ, ಬಹುಶಃ ನನ್ನ ಟಮ್ಮಿ-ಮಮ್ಮಿ ಈ ರೀತಿಯ ಸಂಗೀತವನ್ನುಇಷ್ಟಪಟ್ಟಿರಬಹುದು.”

“ಟಮ್ಮಿ-ಮಮ್ಮಿ?”

“ಹೌದು, ನಾನು ನಮ್ಮ ಅಪ್ಪ ಅಮ್ಮನಿಗೆ ದತ್ತು ಮಗ”

“ಸರಿ ರೋಶನ್, ದೇವರು ನಿನಗೆ ಒಳ್ಳೆಯದು ಮಾಡಲಿ, ನೀನು ಈಗ ಹೋಗಬಹುದು”

ಅರೋರ ಮೇಡಂ ತಮ್ಮ ಬೆಳ್ಳಿಯ ಕಿವಿಯೋಲೆಯನ್ನು ಸವರುತ್ತಾ, ದೀರ್ಘವಾಗಿ ನಗುತ್ತಾ ಹೇಳಿದರು.

******

ರೋಶನ್‌ ದತ್ತು ಮಗನೆಂಬ ವಿಷಯವನ್ನು ಅಪ್ಪ-ಅಮ್ಮ ಸ್ವತಃ ರೋಶನ್‌ ಇಂದಲೂ ಹಾಗೂ ಯಾರಿಂದಲೂ ಮುಚ್ಚಿಟ್ಟಿರಲಿಲ್ಲ. ಹೇಗೆ ರೋಶನ್‌ ತನ್ನ ಕಂದು ಬಣ್ಣದ ಕಣ್ಣುಗಳನ್ನು, ಉದ್ದವಾದ ಹಾಗೂ ಬಲವಾದ ಕಾಲುಗಳನ್ನು ಸ್ವೀಕರಿಸಿದ್ದನೋ ಹಾಗೆಯೇ ಈ ವಿಷಯವನ್ನು ತನ್ನ ಜೀವನದಲ್ಲಿ ಸ್ವೀಕರಿಸಿದ್ದನು.

ರೋಶನ್ ಸುಮಾರು ಎರಡು ವರ್ಷದಮಗು ಆಗಿದ್ದಾಗ ಅವನ ಅಮ್ಮ ಅವನಿಗೆ ಬಂಗಾಲಿಯ ಪುಟ್ಟ ಪುಸ್ತಕದ ಸುಂದರ ಕಥೆಯೊಂದನ್ನು ಓದಿ ಹೇಳಿದಳು. ಅಪ್ಪನೂ ಸಹ ಅಮ್ಮನ ಬಳಿ ಬದಿಯಲ್ಲಿ ಕುಳಿತಿದ್ದರು.ಆಕೆ ಪುರಾತನವಾದ ಮಥುರಾ ಊರಿನಲ್ಲಿನ ವಾಸುದೇವ-ದೇವಕಿಗೆ ಹುಟ್ಟಿದ ಎಂಟು ಮಕ್ಕಳ ಬಗ್ಗೆ ವಿವರಿಸಿದಳು. ದೇವಕಿ-ವಾಸುದೇವನಎಂಟನೇ ಕೂಸು, ಕೃಷ್ಣನು ಹುಟ್ಟಿದ ಸಮಯದಲ್ಲಿ ಭಾರಿ ಮಳೆ. ವಾಸುದೇವನು ಕೃಷ್ಣನನ್ನು ಒಂದು ಬೆತ್ತದ ಬುಟ್ಟಿಯಲ್ಲಿ ಮಲಗಿಸಿ, ಆ ಭೀಕರ ಮಳೆಯಲ್ಲಿ ತನ್ನ ಮಿತ್ರನಾದ ನಂದನ ಕೈಯಲ್ಲಿ ಕೊಟ್ಟಿದನು, ಕೃಷ್ಣ ತನ್ನ ದತ್ತು ಪಡೆದ ಗೋಪಾಲಕ  ನಂದ ಹಾಗೂ ಅವನ ಪತ್ನಿ ಯಶೋದರ ಪ್ರೀತಿಯಲ್ಲಿ ಬೆಳೆದ ಕಥೆಯನ್ನು ಅಮ್ಮ ತನ್ನ ನಾಟಕೀಯ ಧ್ವನಿಯಲ್ಲಿ ಕೈ ಸನ್ನೆ ಮಾಡುತ್ತಾ ಹೇಳಿದಳು.

ಅಪ್ಪನೂ ಸಹ ತಮ್ಮ ರೇಷ್ಮೆಯಂತಹ ನಯವಾದ ಧ್ವನಿಯಲ್ಲಿ ಮರಾಠಿಯಲ್ಲಿ ಕಥೆಯೊಂದನ್ನು ಹೇಳಿದನು.

“ಅತಿರಥನೆಂಬ ಸಾರಥಿ ಒಂದು ಬುಟ್ಟಿಯಲ್ಲಿ ತೇಲುತ್ತಿರುವ ಮಗುವನ್ನು ಕಂಡು ತನ್ನ ಪತ್ನಿ ರಾಧಳೊಂದಿಗೆ ಆ ಮಗುವನ್ನು ದತ್ತು ತೆಗೆದುಕೊಳ್ಳುವ ನಿರ್ಣಯ ಮಾಡಿದನು. ಅವರಿಗೆ ಆ ಮಗುವು ರಾಣಿ ಕುಂತಿ ಹಾಗೂ ಸೂರ್ಯದೇವನದು ಎಂದು ತಿಳಿದಿರುವುದಿಲ್ಲ. ಮಗುವಿನ ಹೆಸರು ಕರ್ಣನೆಂದು ಇಟ್ಟು ಆ ಮಗುವನ್ನು ಸಾಹಸಿ ಹಾಗೂ ನಿರ್ಭೀತ ಯೋಧನನ್ನಾಗಿ ಬೆಳೆಸಿದರು.”

“ರೋಶನ್! ಪ್ರತಿ ಮನೆಗೂ, ಪ್ರತಿ ಮಗುವಿನ ಆಗಮನಕ್ಕೂ ವಿಧ ವಿಧ ರೀತಿ ಇರುತ್ತದೆ. ಪ್ರತೀ ಮಗುವಿಗೂ ತನ್ನದೇ ಆದ ವಿಶೇಷತೆ ಇರುತ್ತದೆ.” ಎಂದು ರೋಶನ್‌ಗೆ ಅಮ್ಮ ಭರವಸೆ ಕೊಟ್ಟಳು.

“ನೀನು ನಮ್ಮನ್ನು ಹೋಲುವುದಿಲ್ಲವೆಂದುದತ್ತು ಸಂಸ್ಥೆಯಲ್ಲಿ ಹೇಳಿದ್ದರು. ಆದರೆ ಅದು ನಮಗೆ ಮುಖ್ಯವಾಗಿರಲಿಲ್ಲ” ಎಂದನು ಅಪ್ಪ.

                                                          ******

ನಾಲ್ಕನೇ ವರ್ಷದ ರೋಶನ್‌ನನ್ನು ಅಮ್ಮಅಪ್ಪ ಅವನು ಹುಟ್ಟಿದ ಪುಣೆಯ ಕುಸಾಲ್ಕರ್‌ ರಸ್ತೆಯಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅವನ ಐದನೇ ವಯಸ್ಸಿನಲ್ಲಿ ಅವನಿದ್ದ ದತ್ತು ಸಂಸ್ಥೆಗೂ ಸಹ ಕರೆದುಕೊಂಡು ಹೋಗಿದ್ದರು. ಪುನಃ ಆರನೇ ವಯಸ್ಸಿನಲ್ಲಿಯೂ ಅವನನ್ನು ಅಲ್ಲಿಗೆ ಕರೆದೊಯ್ದಿದ್ದರು.

ಅವನನ್ನು ದತ್ತು ತೆಗೆದುಕೊಂಡ ದಿನದ ಕಥೆಯನ್ನುಅಪ್ಪಅವನಿಗೆ ವಿವರವಾಗಿ ಹೇಳಿದರು:

“ನಿನ್ನನ್ನು ಮನೆಗೆ ಕರೆತಂದ ದಿನ ನಮಗೆ ಅತ್ಯಂತ ಸ್ಮರಣೀಯವಾದದ್ದು, ಸಿನ್ನಾಮನ್! ನಿಮ್ಮ ಅಮ್ಮ ಹಾಗೂ ನಾನು ಅಷ್ಟೇ ಅಲ್ಲದೆ ನಿನ್ನಅಜ್ಜಿ–ಅಜೋಬಾ(ಮಹರಾಷ್ಟ್ರದವರು  ಅಜ್ಜನನ್ನು ಅಜೋಬಾ ಎನ್ನುತ್ತಾರೆ) ದಾದ ಮೊಶಾಯ್-ದೀದಿಮಾ (ಬಂಗಾಲದಲ್ಲಿಅಜ್ಜನನ್ನು ದಾದ ಮೊಶಾಯ್‌ ಹಾಗೂ ಅಜ್ಜಿಯನ್ನು ದೀದಿಮಾ ಎನ್ನುತ್ತಾರೆ) ಕೂಡ ನಮ್ಮೊಡನೆ ಬಂದರು. ನಮ್ಮ ಬಳಿ ಒಂದೇ ಪುಟ್ಟ ಮಾರುತಿ ಝೆನ್ ಇದ್ದ ಕಾರಣ ಎರಡು ಆಟೋ ರಿಕ್ಷಾಗಳನ್ನು ವ್ಯವಸ್ಥೆ ಮಾಡಬೇಕಾಯಿತು. ಆ ದಿನ ನನಗೆ ಇಂಡಿಯನ್‌ ಕ್ರಿಕೇಟ್‌ ಟೀಮ್‌ನ ಕ್ಯಾಪ್ಟನ್‌ನ ಜವಾಬ್ದಾರಿ ಅರ್ಥವಾಯಿತು. ಹಿಂದಿನ ರಾತ್ರಿ ಹಾಗೂ ಅವತ್ತಿನ ಮುಂಜಾನೆ ಮಳೆ ಸುರಿಯಿತು. ನಮಗೆ ಮಳೆ ಆದದ್ದು ಶುಭ ಸಂಕೇತವೆಂದು ಬಹಳ ಸಂತೋಷವಾಯಿತು.ನೀನು ಬಂದ ಆನಂದವನ್ನುಆಚರಿಸಲು ಮಂಗಳ ಕಾರ್ಯಾಲಯದಲ್ಲಿ

ಬಂಧು ಮಿತ್ರರ ಸಂತೋಷಕೂಟವನ್ನು ಏರ್ಪಡಿಸಿದೆವು.ಬಹಳ ಜನ ಬಂದಿದ್ದರಿಂದ ಕಾರ್ಯವನ್ನು ಬೇರೆ ಒಂದು ದೊಡ್ಡ ಹಾಲ್‌ಗೆ ಬದಲಿಸಬೇಕಾಯಿತು.”

ಈ ಕಥೆಯನ್ನು ಹೇಳು ಎಂದು ಸಿನ್ನಾಮನ್ ಸದಾ ಬೇಡುತಿದ್ದ. ಪ್ರತಿಬಾರಿಯೂ ಕಥೆಯಲ್ಲಿ ಒಂದು ಹೊಸ ವಿಷಯ ಅಪ್ಪ ಸೇರಿಸುತ್ತಿದ್ದನು.ಸಿನಾಮನ್‌ಗೆ ಈ ಕಥೆ ಪ್ರತಿ ಬಾರಿಯೂ ನವ ನವೀನ ಎನ್ನಿಸುತ್ತಿತ್ತು.

                                                *****

ರೋಶನ್‌ ದೊಡ್ಡವನಾದಮೇಲೆ ಒಂದೊಂದು ಬಾರಿ ತನ್ನನ್ನು ಸ್ನಾನಗೃಹದ ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ತನ್ನ ನಿಜವಾದ ಅಪ್ಪಅಮ್ಮ ಹೇಗಿದ್ದಿರಬಹುದೆಂದುಊಹಿಸಿಕೊಳ್ಳುತ್ತಿದ್ದ. ಜೋರಾದ ನಗು ಹಾಗೂ ಕಂಠ ತನ್ನ ಅಮ್ಮನಿಂದ ಬಂದಿತೇ? ಅವರು ಎಲ್ಲಿದ್ದಾರೋ?ಏನು ಮಾಡುತ್ತಿದ್ದಾರೋ?ಅವನು ಪ್ರಯಾಣ ಮಾಡುವಾಗಲೆಲ್ಲಾ ಸುತ್ತ ಮುತ್ತ ನೋಡುತ್ತಾ, ಇಲ್ಲಿ ಯಾರಾದರೂ ತನ್ನ ತಂದೆತಾಯಿ ಇರಬಹುದೇನೋ ಎಂದು ಯೋಚಿಸುತ್ತಿದ್ದ.

ಅವನು ದತ್ತು ಮಗನೆಂದು ಅಪ್ಪ ಅಮ್ಮ ಎಲ್ಲರಿಗೂ ತಿಳಿಸಿದ್ದರು.ಹಾಗಾಗಿ ಅವನಿಗೆ ಈ ವಿಷಯ ನಾಚಿಕೆ,ಮಜುಗರ ತಂದಿರಲಿಲ್ಲ. ಅದೇ ಅವನ ವ್ಯಕ್ತಿತ್ವವಾಗಿತ್ತು ಅವನೂ ಆ ವ್ಯಕ್ತಿತ್ವವನ್ನ ಸಂತೋಷದಿಂದ ಸ್ವೀಕರಿಸಿದ್ದನು.

ರೋಶನ್ ಸುಮಾರು ಆರು ವರ್ಷವಿದ್ದಾಗ ಒಮ್ಮೆ “ನನ್ನ ಹೆತ್ತ ತಾಯಿ ಬಂದು ಕೇಳಿದರೆ ನೀನು ಏನು ಮಾಡುವೆ?” ಎಂದು ಅಪ್ಪನನ್ನು ಕೇಳಿದ್ದನು.

ಅದಕ್ಕೆಅಪ್ಪನು “ನಮಗೆ ಅವರೆಲ್ಲಿದ್ದಾರೆಂದು ಹಾಗೂ ಅವರಿಗೆ ನಾವೆಲ್ಲಿದ್ದೇವೆಂದು ಅರಿವಿಲ್ಲ. ನಾವು ಮೇಲಾಗಿ ನಿನ್ನನ್ನು ಅತಿಯಾಗಿ ಪ್ರೀತಿಸುತ್ತೇವೆ, ನಿನ್ನನ್ನು ನಮ್ಮಿಂದ ದೂರವಾಗಲು ಬಿಡುವುದಿಲ್ಲ” ಎಂದು ಹೇಳಿದ್ದನು.

ಅವನಿಗೆ ಇಂತಹ ಹಲವು ಪ್ರಶ್ನೆಗಳು ಏಳನೆ ವಯಸ್ಸಿನಲ್ಲಿ ಮೂಡಿದ್ದವು.

“ನನ್ನ ಅಪ್ಪ ಅಮ್ಮ ನೋಡಲು ಹೇಗಿದ್ದಾರೆ?ನನ್ನ ತರಹ ಉದ್ದವಿದ್ದಾರೆಯೇ?”ಎಂದು ಪ್ರಶ್ನಿಸಿದ್ದನು.

“ನಮಗೆ ಅದರ ಅರಿವಿಲ್ಲ, ಸಿನ್ನಾಮನ್”

“ಅದು ಹೇಗೆ?”

“ನಾವು ಅವರನ್ನುಎಂದೂ ಭೇಟಿಯಾಗಿಲ್ಲ.”

“ನನ್ನನ್ನು ಅವರು ಹೇಗೆ ತ್ಯಜಿಸಿದರು, ಹೇಗೆ ಅವರಿಗೆ ಮನಸಾಯಿತು?”ಎಂದುಕಿರುಚಿದ್ದ.

ಅಪ್ಪ ಅಮ್ಮ ಅವನನ್ನು ಗಟ್ಟಿಯಾಗಿ ತಬ್ಬಿ ಮುತ್ತಿಟ್ಟಿದ್ದರು.

“ನನ್ನಲ್ಲಿ ಏನಾದರೂ ತಪ್ಪುಕಾಣಿಸಿತಾ” ಎಂದಿದ್ದನು ಸಿನ್ನಾಮನ್.

“ಅವರು ನಿನ್ನನ್ನು ತ್ಯಜಿಸಿಲ್ಲ. ನಿನ್ನಲ್ಲಿ ಏನೂ ತಪ್ಪುಇರಲಿಲ್ಲ, ಈಗಲೂ ಇಲ್ಲ. ನಿನ್ನ ಹೆತ್ತ ತಂದೆ ತಾಯಿ ಏನೋ ನಿಜವಾದ ಕಾರಣದಿಂದಾಗಿ ಈ ನಿರ್ಧಾರವನ್ನುತೆಗೆದುಕೊಂಡಿರುವರು” ಎಂದಿದ್ದನು ಅಪ್ಪ.

ಯಾರೂ ಎಷ್ಟು ಹೇಳಿದರೂ ಅವರು ಯಾಕೆ ತನ್ನನ್ನು ದೂರ ಮಾಡಿದರೆಂದುಯೋಚಿಸುತ್ತಿದ್ದ ಸಿನ್ನಾಮನ್.

ಸಿನ್ನಾಮನ್‌ ಇದ್ದ ಅಪಾರ್ಟ್ಮೆಂಟ್‌ನ ಒಂದನೇ ಮಹಡಿಯಲ್ಲಿ ನಿವೇದಿತ ಹಾಗೂ ಯತೀನ್ ಎಂಬ ದಂಪತಿಗಳಿದ್ದರು. ಅವರು ಪ್ರತಿನಿತ್ಯ ಅಪ್ಪನ ಜೊತೆ ಜಾಗಿಂಗ್‌ಗೆ ಹೋಗುತ್ತಿದ್ದರು.ಅವರಿಬ್ಬರು ಆಗಾಗ್ಗೆ ಬೆವರುತ್ತಾ ಅಪ್ಪನೊಡನೆ ನಗುನಗುತ್ತಾ ಮನೆಗೆ ಬರುತ್ತಿದ್ದರು. ಅಪ್ಪ ಅವರಿಗೆ ಒಂದಲ್ಲಾ ಒಂದು ಕಥೆ ಹೇಳಿ ನಗಿಸುತ್ತಿದ್ದನು.

ಒಂದು ದಿನ ಊಟ ಮಾಡುತ್ತಿರುವಾಗ ಅಮ್ಮಅಪ್ಪನಿಗೆ“ನಿವೇದಿತ ಗರ್ಭಿಣಿ. ಅವಳು ನಿರೀಕ್ಷಿಸುತ್ತಿದ್ದಾಳೆ”ಎಂದಳು. ಅಪ್ಪ ಮುಗಳ್ನಗುತ್ತಾ “ಇಷ್ಟು ಬೇಗ!” ಎಂದನು. ಸಿನ್ನಾಮನ್‌ಗೆ ನಿವೇದಿತಾ ಏನನ್ನು ನಿರೀಕ್ಷಿಸುತ್ತಿದ್ದಾಳೆಂದು ಅರ್ಥವಾಗಲಿಲ್ಲ.ಆದರೆದಿನದಿನಕ್ಕೂ ಉಬ್ಬುತ್ತಿರುವ ನಿವೇದಿತಾ ಅಕ್ಕನ ಹೊಟ್ಟೆಯನ್ನು ನೋಡಿ ರೋಶನ್‌ಗೆ ಕಾಳಜಿ ಶುರುವಾಯಿತು. ಆದರೆ ಅವನಿಗೆ ಯಾರಿಂದಲೂ ಸಾಂತ್ವನ ಸಿಗಲಿಲ್ಲ. ಬದಲಾಗಿಎಲ್ಲರೂ ಸಂಭ್ರಮಿಸುತ್ತಿದ್ದನ್ನು ಕಂಡನು.

“ಅಮ್ಮ ನಿವೇದಿತಾ ಅಕ್ಕನಿಗೆ ಏನಾಗಿದೆ? ಅವಳು ಯಾಕೆ ಏನೂ ಮಾಡುತ್ತಿಲ್ಲ? ಅವಳು ಒಂದು ದಿನ ಸಿಡಿಯುತ್ತಾಳೆ ನೋಡು.”

“ಖೋಕಾ, ಅವಳು ಸದ್ಯದಲ್ಲೆ ಏನನ್ನಾದರೂ ಮಾಡುತ್ತಾಳೆ”

ಒಂದು ದಿನ ನಿವೇದಿತಾ ಅಕ್ಕ ಹಾಗೂ ನಿತಿನ್‌ ಕಾಣೆಯಾದರು. ಅವರ ಮನೆಗೂ ಬೀಗ ಹಾಕಿತ್ತು. ಒಂದು ವಾರದ ನಂತರ ನಿತಿನ್‌ ಡಬ್ಬದಲ್ಲಿ ಕೇಸರಿ ಪೇಡದೊಂದಿಗೆ ಮನೆಗೆ ಬಂದನು. “ಕೌನ್ ಬನೇಗಾ ಕರೋಡ್‌ಪತಿ” ಇಲ್ಲವೇ ಪ್ರಧಾನಮಂತ್ರಿ ಪಟ್ಟವನ್ನು ಗೆದ್ದವನಂತೆ ಪ್ರಜ್ವಲಿಸುತ್ತಿದ್ದ. ಅಮ್ಮನುಬಾಗಿಲಿಗೆ ಬಂದು ಅವನನ್ನು ತಬ್ಬಿ ಅಭಿನಂದಿಸಿದಳು.ಅಪ್ಪನೂ ಅವನನ್ನು ತಬ್ಬಿಕೊಂಡನು.

“ಅವಳ ಹೆಸರೇನು?”

“ಅನ್‌ವೀ”

“ಚಂದದ ಹೆಸರು. ನಮ್ಮತಂಡಕ್ಕೆ ಸುಸ್ವಾಗತ, ಅಭಿನಂದನೆಗಳು” ಎಂದು ಅಪ್ಪ ಮರಾಠಿಯಲ್ಲಿ ಹೇಳಿದನು. ಯತೀನ್‌ನ್ನು ಅಪ್ಪ ಏಕೆ ಅಭಿನಂದಿಸುತ್ತಿದ್ದಾನೆ? ನಿವೇದಿತಾ ಅಕ್ಕನಿಂದ ಅನ್‌ವೀ ಬಂದದ್ದು, ಇದರಲ್ಲಿ ಯತೀನ್‌ನ ಕೊಡುಗೆಯೇನುಎಂದು ಸಿನ್ನಾಮನ್ ಆಶ್ಚರ್ಯ ಪಟ್ಟನು.

ಪ್ರತಿ ಭಾನುವಾರ ಸಂಜೆಅಮ್ಮ ಸಿನ್ನಾಮನ್‌ನ್ನ ತಲೆಗೆ ಸಾಸಿವೆ ಎಣ್ಣೆಯಿಂದ ಮಸಾಜ್‌ಮಾಡುತ್ತಿದ್ದಳು.  ಸಾಸಿವೆ ಎಣ್ಣೆಯಿಂದ ಕೊಬ್ಬರಿಎಣ್ಣೆಗೆ ಅಮ್ಮನ ಮನ ಒಲಿಸಲು ಅಪ್ಪ ಸೋತಿದ್ದನು. ಸಾಸಿವೆ ಎಣ್ಣೆಯ ವಾಸನೆ ಸಿನಾಮಾನ್‌ಗೆ ಇಷ್ಟವಿಲ್ಲದಿದ್ದರೂ ಅವನು ಅದರ ಬೆಚ್ಚನೆಯ, ಸುಂದರ ಅನುಭವವನ್ನು ಪಡೆಯುತ್ತಿದ್ದನು.

ಅಮ್ಮ ಅವನ ತಲೆಯನ್ನು ದೂಡುತ್ತಾ ತಟ್ಟುತ್ತಾ ಮಸಾಜ್ ಮಾಡುತ್ತಿದ್ದಳು.

“ತಲೆಯ ಮಸಾಜ್‌ರಕ್ತ ಸಂಚಲನೆಯನ್ನು ಹಾಗೂ ಬುದ್ದಿವಂತಿಕೆಯನ್ನು ವೃದ್ದಿಸುತ್ತದೆ. ನಿನ್ನ ಅಜ್ಜ-ಅಜ್ಜಿ ನಾವು ಚಿಕ್ಕವರಿದ್ದಾಗ ನಮಗೆ ಹರಳೆಣ್ಣೆಯಿಂದ ತಲೆ ಮಸಾಜ್ ಮಾಡುತ್ತಿದ್ದರು. ಹಾಗಾಗಿ ನಾವು ಇಷ್ಟರ ಮಟ್ಟಿಗೆ ಇದ್ದೇವೆ. ಎಲ್ಲಾ ಮಕ್ಕಳಿಗೂ ಇದು ಅತಿ ಅಗತ್ಯ” ಎಂದಳು.

ಅವನು ಅಮ್ಮನ ಗಮನ ಸೆಳೆಯಲು,

“ಅಮ್ಮ, ನಿನಗೊಂದು ಪ್ರಶ್ನೆ ಇದೆ”

“ಏನಪ್ಪಾ?”

“ಅನ್‌ವೀ ನಿವೇದಿತಾ ಅಕ್ಕನ ಹೊಟ್ಟೆಯಿಂದ ಬಂದಳಲ್ವಾ?”

“ಹೌದು”

“ಹಾಗಾದರೆ ನೀನು ಹಾಗೂ ಅಪ್ಪ…….. ಅಜ್ಜಿಯರು ಹೊಟ್ಟೆಯಿಂದ ಬಂದವರು, ಎಲ್ಲರೂ ಹೀಗೆ ಬಂದವರು ಅಲ್ವಾ?”

“ಹೌದು” ಎಂದಳು.

“ಆದರೆ ನಾನು ನಿನ್ನ ಹೊಟ್ಟೆಯಿಂದ ಬಂದವನಲ್ಲ?”

ಅವನು ಅಮ್ಮನ ಹೊಟ್ಟೆಯನ್ನು ಮುಟ್ಟುತ್ತಾ

“ನಾನು ಇಲ್ಲಿರಲಿಲ್ಲವಾ?”

“ಇಲ್ಲ ನನ್ನ ಹೊಟ್ಟೆಯಿಂದಲ್ಲ ನೀನು ನನ್ನ ಮನಸ್ಸಿನಲ್ಲಿದ್ದೆ” ಎಂದು ಟಾಗೋರ್‌ರವರ ಬೆಂಗಾಲಿ ಹೇಳಿಕೆಯನ್ನು ಹೇಳಿದಳು.

“ಯಾರ ಹೊಟ್ಟೆಯಿಂದ ನಾನು ಬಂದೆ?”

“ನಿನ್ನ ಹೆತ್ತತಾಯಿಯ ಹೊಟ್ಟೆಯಿಂದ”

ತನ್ನ ಹೊಟ್ಟೆಯೊಳಗೊಂದು ಮಗುವಿರುವುದನ್ನ ಅವನು ಊಹಿಸಿದ.ತನ್ನನ್ನೆ ಹೊಟ್ಟೆಯೊಳಗೆ, ತನ್ನ ಕೈಕಾಲುಗಳನ್ನು ಊಹಿಸಿದ. ಅದು ಅವನಿಗೆ ವಿಚಿತ್ರವೆನಿಸಿತು.

“ಅಮ್ಮ! ಮಗು ಹೊಟ್ಟೆಯೊಳಗೆ ಇರುವುದು ಅತೀ ನೋವುಂಟು ಮಾಡುತ್ತದೆ” ಎಂದು ಸಿನ್ನಾಮನ್ ಅರುಚಿದ.

“ಹೌದು, ಆ ನೋವೆಲ್ಲಾ ಮಗು ಹುಟ್ಟಿದ ಮೇಲೆ ಹೊರಟೇ ಹೋಗುತ್ತದೆ”.

“ನಾನು ನಿನಗೆ ಏನೂ ಆ ತರಹದ ನೋವು ಕೊಡದೆ ಒಳ್ಳೆ ಮಗನಾಗಿದ್ದೀನಿ,ಅಲ್ವಾ?”

ಅಮ್ಮ ಅವನ ಗದ್ದವನ್ನು ಹಿಡಿದು ನಕ್ಕಳು.

ಅವಳು ಹಾಡನ್ನು ಗುನುಗುಡುತ್ತಾ ಮಸಾಜ್‌ ಅನ್ನು ಮುಂದುವರೆಸಿದಳು.


Leave a Reply

Back To Top